Monday, December 10, 2012

ಬನ್ನಿ ಕನ್ನಡದ ಗ್ರಾಹಕನ ಕನಸುಗಳನ್ನ ನನಸಾಗಿಸೋಣ !


ಇತ್ತೀಚಿಗೆ ಗೆಳೆಯರೊಬ್ಬರು ಹೋಂಡಾ ಕಂಪನಿಯ ದ್ವಿಚಕ್ರ  ವಾಹನದ  ವಿವರ ಪುಸ್ತಿಕೆ ಅಂದ್ರೆ Manual ಕನ್ನಡದಲ್ಲಿ ಕೇಳಿ ಹೋಂಡಾ ಸಂಸ್ಥೆಗೆ ಮಿನ್ಚಾಯಿಸಿದ್ದರು.ಅದಕ್ಕೆ ಹೋಂಡಾ ಕಂಪನಿ ನೀಡಿದ್ದ ಪ್ರತಿಕ್ರಿಯೆ ಅಚ್ಚರಿ ಹುಟ್ಟಿಸುವಂಥದ್ದು.ನಮ್ಮ ದೇಶದಲ್ಲಿ ವಿವಿಧ 25 ಭಾಷೆಗಳಿದ್ದು  ಅವುಗಳಲ್ಲಿ ಮಾಹಿತಿ ನೀಡಲು ಅಸಾಧ್ಯವಂತೆ. ಕನ್ನಡದಲ್ಲಿ ನೀಡಲು ಆಗದು, ಹೆಚ್ಚಿನ ವಿವರಗಳಿಗೆ ಇಂಗ್ಲಿಷ್ ಮಾಹಿತಿಯನ್ನೇ ಅವಲಂಬಿಸಿ ಎಂದು ನಿಷ್ಟುರವಾಗಿ ಉತ್ತರಿಸಿದೆ ಹೋಂಡಾ ಎಂಬ ಜಗತ್ತಿನ ಅತಿ ದೊಡ್ಡ ಆಟೋಮೊಬೈಲ್ ಸಂಸ್ಥೆ.
ದೊಡ್ಡ ಆಟೋಮೊಬೈಲ್ ಕಂಪನಿಯ ಈ ನಡೆ ವಿಚಿತ್ರವಾಗಿದ್ದು, ಒಂದು ಕುತುಹೂಲ ಕೂಡ ಮೂಡಿಸಿತು.ಇದರ ಪರಿಣಾಮವಾಗಿ ಒಂದು ಚಿಕ್ಕ ಸಂಶೋಧನೆ ಕೈಗೊಂಡಾಗ ಈ ಕೆಳಗಿನ ಚಿತ್ರಣ ಕಂಡುಬಂತು.
ಹೊಂಡಾ ನಮ್ಮ ಕರ್ನಾಟಕ ರಾಜ್ಯದಲ್ಲಿ ಎಷ್ಟು ವ್ಯವಹಾರ ನಡೆಸುತ್ತಿದೆ ಎನ್ನುವತ್ತ ಒಂದು ಕಿರುನೋಟ ಬೀರಿದಾಗ ಕಂಡು ಬಂದ ಕೆಲವು ಅಂಕಿ-ಸಂಖ್ಯೆ ಹೀಗಿದೆ ನೋಡಿ!
ರಾಜ್ಯದಲ್ಲಿ ಹೋಂಡಾ ಒಟ್ಟು 55 ಶೋರೂಂಗಳನ್ನು ಹೊಂದಿದೆ. ಅವುಗಳ ಮೂಲಕ ತಮ್ಮ 11 ವಿವಿದ ಮಾಡೆಲ್ಗಳನ್ನ ರಾಜ್ಯದಲ್ಲಿ ಮಾರಾಟ ಮಾಡುತ್ತಿದೆ.ಇವುಗಳಲ್ಲಿ ಕಡಿಮೆ ಬೆಲೆಯ ಡಿಯೋ ದಿಂದ ಹಿಡಿದು 2ಲಕ್ಷಕ್ಕೂ ಮೇಲ್ಪಟ್ಟ ಬೆಲೆಯ ಸಿಬಿಆರ್ -250 ಮಾಡೆಲ್ಗಳು ಸೇರಿವೆ.



ನೇರ ಮಾರಾಟ,ಬಿಡಿ ಬಾಗಗಳ ಮಾರಾಟ ಮತ್ತು ವಾಹನಗಳ ಸರ್ವಿಸ್ ಮೂಲಕ  ಒಟ್ಟು ವ್ಯವಹಾರ ಸುಮಾರು  :1109,04,00,000 ರೂಪಾಯಿಗಳು.


(ಮಾಹಿತಿ :www.honda2wheelers.com)


ಇನ್ನು ವಿವಿಧ ವಿಮೆ ಕಂಪನಿಗಳೊಂದಿಗೆ ಕೋಟ್ಯಾಂತರ ರೂಪಾಯಿಗಳ ಒಪ್ಪಂದ ಮಾಡಿಕೊಂಡಿರುವ ಹೋಂಡಾ ಕಂಪನಿಯವರು ಅದರಲ್ಲಿ ಎಷ್ಟು ಪಾಲು ಆದಾಯ ಪಡೆಯುವರು ಎನ್ನುವ ವಿವರಗಳನ್ನ ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ ಅನ್ನುವುದು ಅರಿವಿರಲಿ.ಒಟ್ಟಿನಲ್ಲಿ ಹೇಳುವುದಾದರೆ ಸರಿಸುಮಾರು 1100 ಕೋಟಿಗೂ ಮಿಕ್ಕಿದ ದುಡ್ಡು ಹೋಂಡಾ ಕಂಪನಿಗೆ ಕರ್ನಾಟಕದಿಂದ ಬರುತ್ತಿದೆ. ಇಷ್ಟೊಂದು ಆದಾಯ ನೀಡುವ ನಾಡಿನ ಗ್ರಾಹಕರಿಗೆ ಈ ಸಂಸ್ಥೆ ಇಲ್ಲಿನ ಭಾಷೆಯಾದ ಕನ್ನಡದಲ್ಲಿ ವಿವರ ಕೈಪಿಡಿ ನೀಡಲು ಹಿಂದೇಟು ಹಾಕಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿ. 
ಹೋಂಡಾ Manual ಗಳಲ್ಲಿ ಹಿಂದಿಯಲ್ಲಿ ಸುರಕ್ಷತೆಯ ಕೆಲವೊಂದು ಮಾಹಿತಿಗಳನ್ನ ನೀಡಿದ್ದು, ಕನ್ನಡ ನೀಡಲು ಮಾತ್ರ ಆಗದು ಎಂಬ ಧೋರಣೆ ಯಾಕೆ ತಳೆದಿದೆ ಅರ್ಥವಾಗದ್ದು!!


ಬೇರೆಡೆ ಹೀಗಿದೆ ಹೋಂಡಾ Business Model:
ಅಂದಾಜು 95 ಲಕ್ಷ ಜನಸಂಖ್ಯೆ ಹೊಂದಿರುವ ಸ್ವೀಡನ್ ದೇಶದಲ್ಲಿ ಮಿಂದಾಣ ಸಮೇತವಾಗಿ ವಿವರಗಳನ್ನ ಇದೆ ಹೋಂಡಾ ಸಂಸ್ಥೆ ಸ್ವೀಡನ್ ಅಧಿಕೃತ ಭಾಷೆಯಾದ ಸ್ವೀಡಿಶ್ನಲ್ಲಿ ನೀಡಿದೆ.ಅದಕ್ಕಿಂತಲೂ 7 ಪಟ್ಟು ಹೆಚ್ಚಿನ ಅಂದರೆ 7 ಕೋಟಿಯಷ್ಟು ಜನರಿರುವ ಕರ್ನಾಟಕದ ಗ್ರಾಹಕರಿಗೆ ಮಾತ್ರ ಬೇರೆ ನೀತಿಯನ್ನು ಕಂಪನಿ ಹೊಂದಿದೆ ಎಂದರೆ ನಾವೊಮ್ಮೆ ಕುಳಿತು ಯೋಚಿಸಲೇಬೇಕು!

ನನಸಾಗಿಸೋಣ ಕನಸುಗಳನ್ನ:
ಹೌದಲ್ಲವೇ ಇದೆ ತಾನೇ ಹೋಂಡಾ ಸಂಸ್ಥೆಯ ಘೋಷ ವಾಕ್ಯ -ನನಸಾಗಿಸೋಣ ಕನಸುಗಳನ್ನ Power Of Dreams.ಮೇಲೆ ಹೇಳಿದಂತೆ ಅಂದಾಜು 1100 ಕೋಟಿಗಳ ಒಂದು ಆದಾಯ ಮೂಲಕ್ಕೆ ಕಾರಣರಾಗಿರುವ ನಾವೆಲ್ಲಾ ಕನ್ನಡ ದಲ್ಲಿ ಕೈಪಿಡಿಗೆ ಆಗ್ರಹಿಸೋಣ. ಕರ್ನಾಟಕ ಚಿಕ್ಕ ಮಾರುಕಟ್ಟೆ ಇಲ್ಲವೇ ಕೆಲವೇ ಜನರ ಚಿಲ್ಲರೆ ಬೇಡಿಕೆಗೆ ನಾವೇಕೆ ಕನ್ನಡ ಕೈಪಿಡಿ ನೀಡುವುದು ಅನ್ನುವುದು ಹೋಂಡಾ ಸಂಸ್ಥೆಯ ಈ ಗ್ರಾಹಕ ವಿರೋಧಿ ನೀತಿಗೆ ಕಾರಣವಾಗಿರಬಹುದು.ಈ ಎಲ್ಲ ಅಂಕಿ-ಸಂಖ್ಯೆ ವಾಸ್ತವಿಕ ವರದಿ ಕಂಪನಿಗೆ ತಲುಪಿಸೋಣ. ಆಗಲಾದ್ರು ಕಂಪನಿ ಎಚ್ಚೆತ್ತು ಗ್ರಾಹಕರಿಗೆ ಬೇಕಾದುದನ್ನು ನೀಡುವಂತಾಗಲಿ.ಕಂಪನಿಯೇ ಹೇಳುವಂತೆ ಗ್ರಾಹಕನ ಕನಸು ನನಸಾಗಲಿ.
ಇಲ್ಲಿಗೆ ಮಿಂಚೆ ಕಳಿಸಿ ಇಲ್ಲವೇ ಸಂಸ್ಥೆಯ ಮಿನ್ದಾಣ ದಲ್ಲಿ ನಿಮ್ಮ ಕಹಿ ಅನಿಸಿಕೆ ಹಂಚಿಕೊಳ್ಳಿ :
customercare@honda2wheelersindia.com
http://www.honda2wheelersindia.com/contact.aspx

ಕೊನೆಯ gear:
ಮೇಲಿನದ್ದು ಹೋಂಡಾ ಕಂಪನಿಯ ಒಂದು ಚಿಕ್ಕ ಉದಾಹರಣೆ. ಇವರ ವ್ಯವಹಾರ ರಾಜ್ಯದಲ್ಲಿ ಇನ್ನೂ ಹೆಚ್ಚಿನದೇ ಇದ್ದರೂ ಆಶ್ಚರ್ಯ ಪಡುವಂತಿಲ್ಲ. ಇದೆ ರೀತಿ ಕರ್ನಾಟಕದಲ್ಲಿ ಹಲವಾರು ವಿಶ್ವ-ಖ್ಯಾತಿಯ ಆಟೋಮೊಬೈಲ್ ಕಂಪನಿ ಕೋಟಿಗಟ್ಟಲೆ ಆದಾಯ ಕನ್ನಡಿಗರಿಂದ ತಮ್ಮ ಜೇಬಿಗಿಳಿಸುತ್ತಿವೆ. ಈ ಎಲ್ಲ ಕಂಪನಿಗಳು  ನಾಡಿನ ಬಾಷೆಯಲ್ಲಿ ವ್ಯವಹರಿಸಬೇಕೆನ್ನುವ ಜಾಗೃತಿ ಉಂಟಾಗಬೇಕು.ವಿಶ್ವದ ೨ನೇ  ಅತಿದೊಡ್ಡ ದ್ವಿಚಕ್ರ ಉತ್ಪಾದಕ,ವಿಶ್ವದ ನಾಲ್ಕನೇಯ  ಅತಿದೊಡ್ಡ ಟ್ರಾಕ್ಟರ್ ಉತ್ಪಾದಕ,ಹಾಗು ೭ ನೆಯ ಬೃಹತ್ ಕಾರು ಉತ್ಪಾದಕ ದೇಶ ನಮ್ಮದಾಗಿದ್ದು,ದಿನೇ  ದಿನೇ  ಹೊಸ ಕಂಪನಿಗಳು ನಮ್ಮ ದೇಶ-ರಾಜ್ಯಕ್ಕೆ ಕಾಲಿಡುತ್ತಿವೆ.ಇದೆ ಸಮಯಕ್ಕೆ ನಾವೆಲ್ಲಾ ಎಚ್ಚೆತ್ತು ನಮ್ಮನುಡಿಯಲ್ಲಿ ಸೇವೆ ಪಡೆಯುವ ವ್ಯವಸ್ಥೆ ಕಟ್ಟೋಣ ಬನ್ನಿ!Let's Accelerate!

Sunday, August 12, 2012

ರೈಲು ನೀತಿ ಹಿಂಗ್ಯಾಕ ಐತಿ??

ರೈಲು ನೀತಿ ಹಿಂಗ್ಯಾಕ ಐತಿ??


ನಮಸ್ಕಾರ. ಹೇಗಿದೀರಪ್ಪ? ನಮಗಂತೂ ನಮ್ಮ ನಾಡಲ್ಲಿ ನಡೆಯೋ ರೀತಿನೀತಿ ಸರಿಯಾಗಿ ಕಾಣಿಸ್ತಿಲ್ಲ !! ಹಂಗಾಗಿ ನಾನಂತೂ ಚೆನ್ನಾಗಿಲ್ಲ. 

ಮೊನ್ನೆ ಹೈದೆರಬದಗೆ  ಹೋಗಿದ್ದೆ  ಅಲ್ಲಿಯ ವ್ಯವಸ್ಥೆ ನೋಡಿ ನನಗೆ ಸರಿಯನ್ನಿಸಿತು ಹೌದು ಒಂದು ನಾಡಿನಲ್ಲಿ ಅಲ್ಲಿಯ ಬಾಷೆಗೆ ಮೊದಲ ಆದ್ಯತೆ ಕೊಡಬೇಕಲ್ಲವೇ ? ಅದಕ್ಕೆ ತಕ್ಕಂತೆ ಇದೆ ಅಲ್ಲಿ ಕಂಡು ಬಂತು ಸಾರಿಗೆ ಬಸ್ಗಳು ಇರಲಿ ಮೆಟ್ರೋ ರೈಲು ಅಷ್ಟೇ ಅಲ್ಲ ದಕ್ಷಿಣ -ಮದ್ಯ ರೈಲು ಕೂಡ ಅಲ್ಲಿಯ ಜನಕ್ಕೆ ಅರ್ಥವಾಗೋ ಹಾಗೆ ತೆಲಂಗು ಬಾಷೆಯಲ್ಲಿ ಮಾಹಿತಿವಿವರಗಳನ್ನ ನೀಡಿದೆ.



ನಮ್ಮೂರಾಗ ಯಾಕಪ್ಪ ಹಿಂಗ ಆಡ್ತವ್ರೆ ?? 

ಅಲ್ಲ ಈ ನೈಋತ್ಯ ರೈಲು ಇರೋದು ನಮ್ಮ ಹುಬ್ಬಳ್ಳಿಯಲ್ಲಿ ಇದರ ವ್ಯಾಪ್ತಿಯಲ್ಲೇ ರಾಜ್ಯದ ಬಹುತೇಕ ರೈಲು ಕೇಂದ್ರಗಳು ಒಳಪಡುತ್ತವೆ  ಅದೇ  ವ್ಯಾಪ್ತಿಗೆ ವಿಜಾಪುರ-ಹುಬ್ಬಳ್ಳಿ -ಬೆಂಗಳೂರು ಗೋಲಗುಮ್ಮಟ ಎಕ್ಷ್ಪ್ರೆಸ್ಸ ರೈಲು ಬಂಡಿ ಕೂಡ ಸೇರಿದೆ  ಅಲ್ಲಿ ನೋಡಿದ್ರೆ ಕನ್ನಡಿಗರಿಗೆ ಅನುಕೂಲವಾಗುವಂತೆ ಒಂದು ಮಾಹಿತಿ ಕೂಡ ಕೊಟ್ಟಿಲ್ಲ. ಒಂದು ಕಣ್ಣಿಗೆ ಬೆಣ್ಣೆ iಇನ್ನೊಂದು ಕಣ್ಣಿಗೆ ಸುಣ್ಣ ಅಂದ್ರೆ ಇದೇನಾ? ಕನ್ನಡಿಗರಿಗೆ ಮೊದಲು ಬಾರತೀಯನಾಗು ಎಂದು ಕಿವಿ ಮೇಲೆ ಕೆಂಪುತೋಟ(ಲಾಲ್ಬಾಗ್) ಇಟ್ಟವರಲ್ಲಪ್ಪ. ಕೆಳಗಿನ ಚಿತ್ರಗಳನ್ನು ನೋಡಿ ವಿಜಾಪುರ-ಬೆಂಗಳೂರು ನಡುವೆ ಓಡಾಡೋ ಬಂಡಿಯಲ್ಲಿ ಹಿಂದಿ-ಇಂಗ್ಲಿಷ್ ಮಾತ್ರ.ಹೆದರಬಾದ್ ನಿಂದ ವಿವಿದ ಊರಿಗೆ ಹೊರಡುವ ರೈಲುಗಳಲ್ಲಿ ತೆಲಂಗು  ನೀಡಲಾಗಿದೆ.
ದಕ್ಷಿಣ ಮದ್ಯ ರೈಲು ಹೆದ್ರಬಾದ್ ನಲ್ಲಿ ಕೇಂದ್ರ ಹೊಂದಿ ಆಂದ್ರ ನಾಡಿನಿಂದ ಸಂಚರಿಸುವ ಎಲ್ಲ ರೈಲುಗಳಲ್ಲಿ ತೆಲಂಗಿನಲ್ಲಿ ವಿವರ ನೀಡಿದ್ದಾರೆ. ಅದೇ ನಮ್ಮ ತೆಂಕಣ -ಪಡುವಣ (ನೈಋತ್ಯ) ರೈಲಿನ ಕೇಂದ್ರ ಹುಬ್ಬಳ್ಳಿಯಲ್ಲಿ ಹೊಂದಿ ಬರಿ ಬಿಹಾರಿಬಾಬುಗಳ ಆಳ್ವಿಕೆಯಲ್ಲಿ ನಡೀತಾ ಇದೆ. ಕನ್ನಡಿಗರು ಮಾತ್ರ ಬಾರತ ಬಾರತೀಯತೆ ಅಂತ ಕಥೆ ಕೇಳ್ಕೊಂಡು ತಮ್ಮ ನಾಡಲ್ಲಿ ಕನ್ನಡ ವಿಲ್ಲದೆ ಅನಾಥರಾಗಿದ್ದಾರೆ.
ಕನ್ನಡಿಗರನ್ನ ಯರ್ರಬಿರಿ ಉಗಿದು ಹಿಂದಿಗರನ್ನೇ ನೈರುತ್ಯ ರೈಲಿನಲ್ಲಿ ತುಂಬಿರುವ ಲಾಲೂ ಯಾದವ ಅವರ ಕೊಡುಗೆಯೇ ಇದು. ತಲೆತಲಾಂತರದಿಂದ ಕನ್ನಡಿಗರ ಮೇಲೆ ಇಂಥ ಗದಾಪ್ರಹಾರ ನಡೆದಿದೆ.ಒಂದೆಡೆ ಹಿಂದಿ ಹೇರಿಕೆ ಇನ್ನೊಂದೆಡೆ ನಮ್ಮ ಬಾಶೆಯಲ್ಲಿ ದೊರೆಯದೆ ಪರಬಾಷೆಗೆ ಮೊರೆಹೊಗಬೇಕಾದ ಕನ್ನಡಿಗರ ದು- ಸ್ತಿತಿ.


ಮುನಿಯನ ಮಾದರಿ:

ರಾಜ್ಯದವರೇ ಆದ  ಕೇಂದ್ರದ ರಾಜ್ಯ ರೈಲು ಸಚಿವ ಕೆ.ಎಚ್.ಮುನಿಯಪ್ಪನವರು ಸುಮ್ಮನೆ ಇರದೇ ನಮ್ಮ ಬಾಗದಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ಸ್ವಲ್ಪ ತೆರೆಯಳೆಯಬೇಕಿದೆ. ನೈರುತ್ಯ ರೈಲ್ವೆಯಲ್ಲಿ ಲಾಲೂ ಬರಿ ಬಿಹಾರಿಗರನ್ನು ತುಂಬಿದಾಗ ರಾಜ್ಯದ ಸಚಿವ,ಶಾಸಕರು,ಸಂಸದರು ಮೌನಕ್ಕೆ ಶರಣಾಗಿದ್ದರು.ಈಗಲೂ ಇದೆ ಮಾದರಿ ಅನುಸರಿಸಿದರೆ ನಮಗೆ ಹಣೆ ಮೇಲೆ ಪಂಗನಾಮ, ಬಾಯಿಗೆ ಮಣ್ಣು ಕಚಿತ.


ಹಿಂಗ ಮಾಡ್ರಿ:

ಮೊನ್ನೆ ಗೆಳೆಯನೊಬ್ಬ ಗದಗನಿಂದ- ಹುಬ್ಬಳ್ಳಿ ಗೆ ಹೊರಡುವಾಗ ರೈಲಿನ ಚೀಟಿಯಲ್ಲೂ ಕನ್ನಡವೇ ಇಲ್ಲವೆಂದು ತಮ್ಮ ಬೇಸರ ವ್ಯಕ್ತ ಪಡಿಸಿದ್ದರು.ಇದೆ ರೀತಿ ಶಿವಮೊಗ್ಗ-ಬೆಂಗಳೂರು ರೈಲಿನ ಮಾರ್ಗದಲ್ಲೂ ಕನ್ನಡದಲ್ಲಿ ಮಾಹಿತಿಯೇ ಇಲ್ಲವೆಂದು ಗೆಳೆಯರು ತಿಳಿಸಿದ್ದರು.ಕೇಂದ್ರದ ಅಧೀನದಲ್ಲಿರುವ ಪೋಸ್ಟ್,ಬಿ.ಎಸ್.ಏನ್.ಎಲ್ ಸಂಸ್ಥೆಗಳಿಂದ ಮೊದಲು ಮೂಡುತ್ತಿದ್ದ ಕನ್ನಡ ನಿದಾನವಾಗಿ ಮಾಯವಾಗಿದೆ. ಸುಮ್ಮನೆ ಕೂತು ಹೋಗಲಿ ಬಿಡು ಅನ್ನೋ ಕನ್ನಡಿಗರ ವಿಶಾಲ ಮನೋದೋರಣೆಗೆ ಕೇಂದ್ರ ಸರಕಾರ ಕೊಡುತ್ತಿರುವ ಕೊಡುಗೆ ಇದು. ಈಗ್ಲಾದ್ರೂ ನಾವೆಲ್ಲರೂ ಎಚ್ಚೆತ್ತು ಇದನ್ನ ವಿರೋಧಿಸಬೇಕಾಗಿದೆ. ಹಿಂದಿ ಹೇರಿಕೆಗೆ ಕಡಿವಾಣ ಹಾಕೋಣ. ಬನ್ನಿ ಕೆಳಗಿನ ಮಿನ್ಚಂಚೆಗೆ ಮಿನ್ಚಾಯಿಸಿ ಈ ದುರಾಡಳಿತಕ್ಕೆ ವಿರೋಧಿಸಿ:

cpro@swr.railnet.gov
.in,customercare@indianrai

lways.gov.in,khmuni@sansad
.nic.in

Saturday, March 24, 2012

ನಮಗೂ ಬರಲಿ ಒಂದು ಹೊಸ ಪ್ರಾದೇಶಿಕ ಪಕ್ಷ, ಸಿಗಲಿ ನಾಡಿಗೆ ಹೈ -ಕಮಾಂಡ್ ನಿಂದ ಮೋಕ್ಷ

ನಿಜ ಅಲ್ವ? ನಮ್ಮ ರಾಜ್ಯಕ್ಕೂ ಒಂದು ಪ್ರಾದೇಶಿಕ ಪಕ್ಷವಿದ್ದು ಕನ್ನಡನಾಡಿನ ಬಗ್ಗೆ ಹೋರಾಡಿದರೆ ಎಷ್ಟು ಒಳ್ಳೆಯದು ಒಂದ್ಸಲಿ ಯೋಚಿಸಿ.
ಪ್ರಾದೇಶಿಕ ಪಕ್ಷಗಳ ಅಲೆ-ಸ್ಥಳೀಯ ಮುಖಂಡರಿಗೆ ಬೆಲೆ :
ಕಳೆದ ೨ ವಾರಗಳ ಹಿಂದೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆದು ಫಲಿತಾಂಶ ಎಲ್ಲರ ಮುಂದೆ ಇದೆ. ದೇಶದ ಅತಿ ದೊಡ್ಡ ರಾಜ್ಯವೆಂದೇ ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶಕ್ಕೆ ಯುವ ನಾಯಕ  'ಅಖಿಲೇಶ್ ಯಾದವ' ಆಯ್ಕೆಯಾಗಿ,ಸಣ್ಣ ವಯಸ್ಸಿನ ಮುಖ್ಯ ಮಂತ್ರಿ ಎನ್ನಿಸಿಕೊಂಡಿದ್ದಾರೆ.ಮಾಯಾವತಿಯ ವಜ್ರಮುಷ್ಟಿಯಲ್ಲಿದ್ದ ಉ.ಪ್ರ.ವನ್ನು ತಮ್ಮ ತೆಕ್ಕೆಗೆ ಒಲಿಸಿಕೊಳ್ಳಲು ರಾಷ್ಟ್ರೀಯ ಪಕ್ಷಗಳು ಹರ-ಸಾಹಸವನ್ನೇ ಪಟ್ಟಿದ್ದವು.ಹಲವು ವರುಷಗಳಿಂದ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ದೊಂಬರಾಟಕ್ಕೆ ಜನ ಮತ್ತೆ ಸೊಪ್ಪು ಹಾಕದೆ,ನಮ್ಮನ್ನು ಆಳಲು ನಮ್ಮಲ್ಲಿ ಸಾಕಷ್ಟು ಜನರಿದ್ದಾರೆ.ದೆಲ್ಹಿಯ ದಣಿಗಳು ಹೇಳಿದಂತೆ ಕುಣಿಯೋ ಮುಖ್ಯ ಮಂತ್ರಿ ಬೇಡೋ ಅನ್ನೋ ಉತ್ತರ ನೀಡಿದ್ದಾರೆ. ಇನ್ನು ಪಂಜಾಬಿ ಸರದಾರಗಳು ಕೂಡ "ಆಕಾಲಿ ದಳ"ಕ್ಕೆ ಮನ್ನಣೆ ನೀಡಿದ್ದಾರೆ.ಭಾ.ಜ.ಪ.ಕಾಂಗ್ರೆಸ್ಸ್ ಗಳು ಚಿಕ್ಕಪುಟ್ಟ ಗೋವ,ಮಣಿಪುರ ನಂಥ ರಾಜ್ಯಗಳನ್ನು ತಮ್ಮೆಡೆ ಉಳಿಸಿಕೊಂಡು ಹಾರಾಡುತ್ತಿವೆ.

ಕಳೆದ ಹಲವು ದಶಕಗಳಿಂದ ತಮಿಳುನಾಡು,ಕೇರಳ,ಒರಿಸ್ಸಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಾದೇಶಿಕ ರಾಜಕೀಯ ಪಕ್ಷಗಳೇ ಮುಂಚುಣಿಯಲ್ಲಿದ್ದು ಜನ ಪರತೆಯನ್ನು ಸಾರಿ ಹೇಳಿವೆ.ಪ್ರಜಾಪ್ರಭುತ್ವದ ನಿಜವಾದ ರೂಪವನ್ನು ಈ ರಾಜ್ಯಗಳ ಜನತೆ ಭಾರತಕ್ಕೆ ತೋರಿಸಿ ಕೊಟ್ಟಿದ್ದಾರೆ.ತಮಿಳುನಾಡಿನಲ್ಲನ್ತು ಡಿ.ಎಂ.ಕೆ ,ಎ.ಆಯ.ಎ .ಡಿ.ಎಂ.ಕೆ,ಪೀ.ಎಂ.ಕೆ ಎಂಬ ಸ್ಥಳೀಯ ಪಕ್ಷಗಳೇ ಹೆಚ್ಚು ಜನಮನದಲ್ಲಿದ್ದು,ಬೇರೆ ದೆಲ್ಲಿಯಲ್ಲಿ ಕೇಂದ್ರ-ಕಛೇರಿಯನ್ನು ಹೊಂದಿದ ಪಕ್ಷಗಳಿಗೆ ನೆಲೆ ಕಾಣಲು ಬಿಟ್ಟಿಲ್ಲ.ಜಯಲಲಿತಾ ಮತ್ತು ಕರುಣಾ ನಿಧಿ ಇವರದೇ ಅಟ್ಟಹಾಸ. ಪಕ್ಕದ ಮಹಾರಾಷ್ಟ್ರದಲ್ಲಿ ಮುದಿ  ಗೂಬೆ ಬಾಳ-ಟಾಕರೆ ಶಿವಸೇನೆ, ಶರದ್ ಪವಾರ್ ರ ರಾಷ್ಟ್ರವಾದಿ ಕಾಂಗ್ರೆಸ್ಸ್ ಗಳು ಹೆಚ್ಚು ಜನ ಪ್ರಿಯ.  ಒರಿಸ್ಸಾದಲ್ಲಿ ಬಿಜು ಜನತಾದಳ ಪಕ್ಷ ಅಸ್ತಿತ್ವಕ್ಕೆ ಬಂದಾಗಿನಿಂದ ಈ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳ ಹುಟ್ಟೇ-ಅಡಗಿದಂತೆ ಆಗಿದೆ. ಇದೆ ಪಟ್ಟಿಗೆ ನೀವು ಪಶ್ಚಿಮ-ಬಂಗಾಳವನ್ನು ಸೇರಿಸಬಹುದು.ಮಮತಾ ಬ್ಯಾನೆರ್ಜಿ ನೇತ್ರತ್ವದ ತೃಣಮೂಲ ಬಹುದಿನದಿಂದ ನಡೆಯುತ್ತಿದ್ದ ಕಮ್ಯುನಿಸ್ಟರಿಗೆ ಗೇಟ್ ಪಾಸ್ ನೀಡಿದ್ದಲ್ಲದೆ,ಇತರೆ ಪಕ್ಷಗಳನ್ನು ತೃಣ ಸಮ ಮಾಡಿದೆ. ಆಂಧ್ರದಲ್ಲಿಯೂ ಚಂದ್ರ ಬಾಬು ನಾಯಿಡು ರವರ ಟಿ.ಡಿ.ಪಿ ಮತ್ತೊಬ್ಬ ಚಂದ್ರ ಶೇಕರ ರಾವ್ ರವರ  ಟಿ.ಆರ್.ಎಸ್ ಸ್ಥಳೀಯ ಕೇಂದ್ರಿಕ್ರುತವಾಗಿದ್ದು.ಟಿ.ಡಿ.ಪಿ.ಗೆ ಈ ಮುಂಚೆ ಅಧಿಕಾರದ ಗದ್ದುಗೆಯನ್ನು ಆಂಧ್ರದ ಜನತೆ ನೀಡಿದ್ದರು. 
ಗುಜರಾತ್ ರಾಜ್ಯದಲ್ಲಿ ಭಾ.ಜ.ಪ ಆಡಳಿತದಲ್ಲಿದ್ರು ನರೇಂದ್ರ ಮೋದಿ ಗುಜರಾತಿ ಜನಪರ ಕಾರ್ಯಗಳಿಂದಲೇ ಗೆದ್ದಿದ್ದು ಎಲ್ಲರಿಗು ಗೊತ್ತಿದ್ದ ವಿಚಾರ.ಈಶಾನ್ಯ ರಾಜ್ಯಗಳಲ್ಲಿ ಆಸಂ ಗಣ ಪರಿಷದ,ಸಿಕ್ಕಿಂ-ಡೆಮಾಕ್ರಟಿಕ್ ಫ್ರಂಟ್,ಮೆಘಾಲಯ-ನ್ಯಾಷನಲ್ ಕಾಂಗ್ರೆಸ್ಸ್ ನಂಥ ಹಲವಾರು ಸ್ಥಳೀಯ ಪಕ್ಷಗಳು ಪ್ರಚಲಿತದಲ್ಲಿದ್ದು ತಮ್ಮ ಜನರಿಗಾಗಿ ಕೆಲಸ ಮಾಡುತ್ತಿವೆ.

ಯಾರಿಗೆ ಹೇಳೋಣ ನಮ್ಮ ಪ್ರಾಬ್ಲೆಮ್ಮು?
ಕರುನಾಡಿನಲ್ಲಿ ಮಾತ್ರ ಯಾಕೆ ಹೀಗೆ ಅಂತ ನಮ್ಮೆಲ್ಲರ ಪ್ರಶ್ನೆ ಅಲ್ಲವೇ? ತಲೆ -ತಲಾಂತರದಿಂದ ನಮ್ಮಲ್ಲಿ ನಾಯಕರುಗಳು ಕಾಂಗ್ರೆಸ್ಸ್ ಅಥವಾ ಭಾ.ಜ.ಪ ಎರಡೇ ಪಕ್ಷಗಳು ರಾಜ್ಯಕ್ಕೆ ಅನ್ನೋ ದುರ್ವಿಚಾರದಿಂದ ನಾಡಿಗೆ ದ್ರೋಹವಾಗಿದೆ.ಹಲವು ವರುಷಗಳಿಂದ ಬಹುತೇಕ ನಡೆಯುವ ಚುನಾವಣೆಗಳಲ್ಲಿ ಇವೆರಡೆ ಪಕ್ಷಗಳು ಬಹುಪಾಲು ಯಶಸ್ಸು ಕಂಡಿದ್ದು,ಸ್ಥಳೀಯ ಪಕ್ಷಗಳನ್ನ ಬೆಳೆಯದಂತೆ ನೋಡಿ ಕೊಂಡಿವೆ. ಒಂದು-ಕಾಲದಲ್ಲಿ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಿ ನಾಡಿನ ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗ್ಡೆ ರವರು ಹುಟ್ಟುಹಾಕಿದ ಜನತಾ-ದಳ ಬಹಳಷ್ಟು ಕಷ್ಟದಲಿ ಸಿಲುಕಿ ಅಂತರ್-ಜಗಳದಿಂದ ಒಡೆದು ನುಚ್ಚು ನೂರಾಗಿ ಗೌಡರ ಪಾಲಾಯಿತು.ಇಗ ಅದು ಬರಿ ಮಣ್ಣಿನ ಮಕ್ಕಳ ಅಲ್ಲಲ್ಲ ದೇವೇಗೌಡರ ಮಕ್ಕಳ ಪಕ್ಷವಾಗಿ ಬೆಳೆದಿದೆ.ದಕ್ಷಿಣ ಭಾರತದಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ  ಅಧಿಕಾರದ ಗದ್ದುಗೆ ಹಿಡಿದು ಬಿಗಿದ ಭಾರತಿಯ ಜನತಾ ಪಾರ್ಟಿ ಎಷ್ಟರ ಮಟ್ಟಿಗೆ ಕನ್ನಡಪರ,ಕರ್ನಾಟಕದ ಜನತೆಯ ಪರ ಎಂಬುದು ಈಗಾಗಲೇ ತೋರಿಸಿ ಕೊಟ್ಟಿದೆ!!ಬೆಳಗಾವಿ ವಿಷಯ ಬಂದರೆ ಮಹಾರಾಷ್ಟ್ರದಲ್ಲಿ ತನ್ನ ಮಿತ್ರ ಶಿವಸೇನೆಗೆ ತಾಳ ಹಾಕುತ್ತ,ಕನ್ನಡ ವಿರೋಧಿ ಪಕ್ಷಗಳೊಡನೆ ಬೆರೆಯುತ್ತಾ ನಾಡ-ದ್ರೋಹಬಗೆಯುತ್ತಿದೆ. ಅಷ್ಟೇ ಅಲ್ಲದೆ ರಾಜ್ಯಸಭೆಗೆ ಕನ್ನಡ ಅಭ್ಯರ್ಥಿಗಳನ್ನು ಕಳಿಸದೇ ನೆರೆಯ ವೆಂಕಯ್ಯ,ರಾಜಕೀಯದ ಗಂಧ ಗಾಳಿ ಗೊತ್ತಿರದ ಹೇಮಾ-ಮಾಲಿನಿರನ್ನು ಆಯ್ಕೆ ಮಾಡಿ ಕನ್ನಡಿಗರ ಹಿನ್ನೆಡೆಗೆ ನಾಂದಿ ಹಾಡಿದೆ.ಕಾಂಗ್ರೆಸ್ಸ್ ಅಧಿಕಾರಾವಧಿಯಲ್ಲೂ ರಾಜ್ಯದ ಹಿತಾಸಕ್ತಿಗೆ ಬೆಂಕಿ ಬಿದ್ದಿದ್ದೆ ಹೆಚ್ಚು.

ಹೈ ಕಮಾಂಡ್ ಎಂಬ ಬೆದರು ಬೊಂಬೆ:
ಪ್ರಜಾಪ್ರಭುತ್ವದಲ್ಲಿ ನಾವುಗಳು ಆರಿಸಿದ ಜನಪ್ರತಿನಿಧಿಗಳೆಂದು ಕರೆಸಿಕೊಳ್ಳೋ ಅಭ್ಯರ್ಥಿಗಳು ನಮ್ಮ ರಾಜ್ಯವನ್ನು ಆಳಬೇಕು ಆವಾಗಲೇ ಜನತೆಯ ಆಯ್ಕೆಗೆ ಮನ್ನಣೆ ದೊರೆತಂತೆ. ಉಸಿರಾಡಲು ಕೂಡ ಅಪ್ಪಣೆ ಪಡೆಯಲು ಡೆಲ್ಲಿಗೆ ನಮ್ಮ ನಾಯಕರು ಹೋಗಬೇಕು? ಇದೆ ರೀ ಹಾಯ್-ಕಮಾಂಡ್ ರಾಜಕಾರಣ ಅನ್ನೋದು.ಗ್ರಾಮ-ಪಂಚಾಯ್ತಿ,ಪುರ-ಸಭೆಯಿಂದ ಹಿಡಿದು ಲೋಕಸಭೆ,ರಾಜ್ಯಸಭೆಗೆ ಆಯ್ಕೆಯಾಗೋ ಅಭ್ಯರ್ಥಿಗಳನ್ನು ಡೆಲ್ಲಿಯಲ್ಲಿ ಕುಳಿತಿರುವ ರಾಜಕಾರಣಿಗಳು ನಿರ್ಧಾರ ಮಾಡೋದು ಅಂದ್ರೆ ಏನು ಅರ್ಥ? ನಾವು ಚುನಾಯಿಸಿದ ಜನರಿಗೆ ಯಾವುದೇ "ಪವರ್" ಇಲ್ಲದೆ ಪ್ರವರ ಕಳೆದು ಕೊಳ್ಳಬೇಕೆ? ಪಕ್ಷದಲ್ಲಿ ಭಿನ್ನಮತದ ಶಮನಕ್ಕು ಇವರೇ ಬೇಕು, ಸಿ.ಎಂ ಆಯ್ಕೆಗೂ ಇವರೇ ಸೈ ಅನ್ನಬೇಕು! ಇದ್ಯಾವ ಸೀಮೆಯ ಪ್ರಜಾ-ಪ್ರಭುತ್ವ ಅನ್ನೋದು ದಿಲ್ಲಿಯ ದೊರೆಗಳು ಸ್ಪಷ್ಟ ಪಡಿಸಬೇಕಾಗಿದೆ? ಇದರಿಂದ ರಾಜ್ಯದ ಬೆಳವಣಿಗೆ ಕುಂಠಿತ ಗೊಂಡಿದೆ.
 ಕರ್ನಾಟಕ ಇಂದು ಎದುರಿಸುತ್ತಿರವ ನದಿ,ಗಡಿ,ಅಥವಾ ನಮ್ಮ ಇತರೆ ಸಮಸ್ಯೆಗಳಿಗೆ ಎಂದಿಗೂ ನ್ಯಾಯ ಸಿಕ್ಕಿಲ್ಲ.ಹಲವು ನಾಯಕರು ಬದಲಾದರೆ ಹೊರತು ಅಕ್ಕ-ಪಕ್ಕದ ರಾಜ್ಯಗಳೊಂದಿಗೆ ಅಂಟಿಕೊಂಡಿರುವ ಸಮಸ್ಯೆಗಳ ಪರಿಹರಿಸಲು ಯಾವ  ಹೈ-ಕಮಾಂಡ್ ಮುಂದೆ ಬರಲೇ ಇಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಲು ನ್ಯಾಯಯುತವಾದ ರಾಜ್ಯದ ನಡೆಗಳನ್ನು ವಿರೋಧಿಸದರೆ ಹೊರತು ಕನ್ನಡಿಗರ ಪರ ನಿಲ್ಲಲಿಲ್ಲ. ಅಸ್ತಿತ್ವ ಹೊಂದಿರುವ ರಾಜ್ಯದಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳಲು, ಅಸ್ತಿತ್ವ ಇರದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ನಮ್ಮ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟರೆ ಹೊರತು ಜನರಂದು ಕೊಂಡಂತೆ ನಡೆಯಲಿಲ್ಲ.ಕಾವೇರಿ ನದಿ ವಿಚಾರ ದಲ್ಲಿ ವಾಜಪೈ ಸರ್ಕಾರ ತಮಿಳುನಾಡಿಗೆ ಸೈ ಅಂದರೆ, ಎಸ್.ಎಂ.ಕೃಷ್ಣ ,ಯಡಿಯೂರಪ್ಪ ಸರಕಾರಗಳು ಕೃಷ್ಣ ನದಿ ನೀರಿನ  ಹಕ್ಕಿಗಾಗಿ ಹೋರಾಡದೆ ಹೈ-ಕಮಾಂಡ್ ಆದೇಶವನ್ನು ಚಾಚು ತಪ್ಪದೆ ಪಾಲಿಸಿದವು.ಕೆಲಸವಿಲ್ಲದೆ ಗಡಿ ತಂಟೆಗೆ ಮಹಾರಾಷ್ಟ್ರ ಮುಂದಾದಗ್ಲು ಭಾ.ಜ.ಪ ಶಿವಸೇನೆ ತಾಳಕ್ಕೆ ಕುಣಿದರೆ,ಕಾಂಗ್ರೆಸ್ಸು ಹೈ-ಕಮಾಂಡ್ ಮಾತಿಗೆ ಓಗೊಟ್ಟು ಮೌನಕ್ಕೆ ಶರಣಾಯಿತು.ನಮ್ಮ ಬಾಷೆಗೆ ಶಾಸ್ತ್ರೀಯ ಸ್ಥಾನ-ಮಾನ ದೊರೆಕಿಸಲು ತಂಟೆ ಮಾಡಿದ ತಮಿಳರಿಗೂ ದಿಲ್ಲಿಯ ದೊರೆಗಳು ಹೌದು ಎಂದರು.

ಆಗಬೇಕಾಗಿರೋದು ಏನು?
ಸದ್ಯಕ್ಕೆ ರಾಜ್ಯದಲ್ಲಿ ಇರೋ ಗಡಿ,ನದಿ,ವಲಸೆ,ಉದ್ಯೋಗ ಮುಂತಾದ ಸಮಸ್ಯೆಗಳಿಗೆ ಕನ್ನಡಪರ ಸಂಘಟನೆಗಳಾದ ಕ.ರ.ವೇ,ಜಯ-ಕರ್ನಾಟಕ,ವಾಟಾಳ್ ಪಕ್ಷದತ್ತ ಜನ ಹೋಗಬೇಕಾಗಿದೆ. ಎಷ್ಟೇ ಆದರು ಇವು ಸಂಘಟನೆಗಳು-ಬರಿ ಹೋರಾಟ ಮಾತ್ರ ಸಾಧ್ಯ. ಅಷ್ಟಾಗಿಯೂ ಕ.ರ.ವೇ ಯಂತಹ ಸಂಘಟನೆಗಳು ರಾಜ್ಯದ ಪರ ನಿಂತಿವೆ,ಉತ್ತರ ಕರ್ನಾಟಕದಲ್ಲಿ ನೆರೆ ಮತ್ತಿತರೇ ಕಷ್ಟ ಉಂಟಾದಾಗ ಜನರಿಗೆ ಸಹಾಯಮಾಡಿದ್ದು ಎಲ್ಲರಿಗೂ ಗೊತ್ತಿದ ವಿಚಾರ.ಇವುಗಳು ಪಕ್ಷಗಳಾಗಿ ಅಧಿಕಾರಕ್ಕೆ ಬಂದಾಗಲೇ ನಮ್ಮಲ್ಲಿರೋ ಕಷ್ಟಗಳಿಗೆ ಸ್ಪಂದಿಸುವ ಕಾರ್ಯಗಳು ಆರಂಭಗೊಳ್ಳುವವು.ಲೋಕಸಭೆಯಲ್ಲಿ ನಮ್ಮ ಅಹವಾಲುಗಳನ್ನು ಕೇಂದ್ರ-ಸರಕಾರ ಕೇಳಿ ಬಗೆಹರಿಸುವತ್ತ ಚಿತ್ತಕೊಡುವುದು.ಪ್ರತಿಬಾರಿಯ ರೈಲ್ವೆ ಬಜೆಟ್ ನಲ್ಲಿ ಚೊಂಬು ನೀಡುವ ರೈಲ್ವೆ ಸಚಿವರುಗಳು ರಾಜ್ಯದ ಒಳ-ನಾಡಿಗೆ ಅನುಕೂಲವಾಗುವಂತೆ ಹೊಸ ರೈಲು ಬಿಡುವರು.ರಾಜ್ಯದ ವಿಚಾರದಲ್ಲಿ ತಮಿಳುನಾಡು,ಮಹಾರಾಷ್ಟ್ರ,ಆಂಧ್ರ ಪರ ನ್ಯಾಯ ನೀಡುವ ಕೇಂದ್ರ-ಸರಕಾರ ಬದಲಾಗುವುದು.ಇವೆಲ್ಲ ಆಗಬೇಕಾದರೆ ಸ್ಥಳೀಯ ಜನರ ಕೇಂದ್ರಿಕೃತ ಪಕ್ಷದ ಉದಯವಾಗಬೇಕಿದೆ,ಜನತೆಯು ಇದರತ್ತ ಮುಖ ಮಾಡಬೇಕಿದೆ.ಇಂದಿನ ಹೊಸ ಯುಗಾದಿ ,ಹೊಸ ವರುಷಕ್ಕೆ ಕನ್ನಡಿಗರ ಯೋಚನಾ ಲಹರಿಯನ್ನು ಬದಲಾಯಿಸಿ ಹೊಸ ಕನ್ನಡ ಪಕ್ಷಕ್ಕೆ ಸ್ವಾಗತ ಮಾಡಲಿ.ಬರಿ ಬೆವನ್ನೇ ತಿಂದಿರುವ ಜನತೆಗೆ ಬೆಲ್ಲದ ಸವಿಯು ಬರಲಿ.

ಅಂತಿಮ ಲಹರಿ:
ಆರ್.ಎಸ್.ಎಸ್ ನ ಹಿರಿಯ ನಾಯಕ ಸುರೇಶ ಜೋಷಿ ಅವರು  ಮೊನ್ನೆ ಹೇಳಿದ್ದು ನೋಡಿ-ಸ್ಥಳೀಯ /ಪ್ರಾದೇಶಿಕ ಪಕ್ಷಗಳ ಬೆಳವಣಿಗೆ ದೇಶದ ಚಿಂತೆಗೆ ಕಾರಣವಂತೆ.ಸಂಘ-ಪರಿವಾರದ ಈ ಅಧಿಕಾರದ ದುರಾಸೆಯ ಶಿಸ್ತು ದೇಶದ ಪ್ರಜಾಪ್ರಭುತ್ವಕ್ಕೆ ಮಾರಕ. ಕರ್ನಾಟಕದಂತೆ ಎಲ್ಲ ರಾಜ್ಯಗಳು ಕೂಡಿದ್ರೆನೆ ಈ ದೇಶ  ಅನ್ನೋದನ್ನ ಇಂಥವರು ಮನಗಾಣಬೇಕಿದೆ.ಇಲ್ಲದೆ ಹೋದಲ್ಲಿ ಪ್ರತಿ-ರಾಜ್ಯದಲ್ಲಿ ಸ್ಥಳೀಯ ನಾಯಕತ್ವ ಪಡೆಯಲು ಶಾಸಕ,ಸಚಿವರುಗಳು ರೆಸಾರ್ಟ್ ರಾಜಕಾರಣ ಮಾಡಬೇಕಾಗುವುದು.